ನೀಲಿ ನಕ್ಷೆ-
ವಾಸ್ತುಶಿಲ್ಪ ಮತ್ತು ಯಂತ್ರಶಿಲ್ಪಗಳಿಗೆ ಸಂಬಂಧಿಸಿದಂಥ ನಕ್ಷೆಗಳನ್ನು ವಿಶೇಷ ರಾಸಾಯನಿಕಗಳ ನೆರವಿನಿಂದ ನೀಲಿ ಹಿನ್ನೆಲೆಯಲ್ಲಿ ಬಿಳಿಗೆರೆ ಎದ್ದು ಕಾಣುವಂತೆ ಮಾಡಿದ ಛಾಯಾಗ್ರಾಹಕ ಮುದ್ರಣ (ಬ್ಲೂ ಪ್ರಿಂಟ್). ಸಾಮಾನ್ಯವಾಗಿ ಒಂದು ಯಂತ್ರದ ಅಥವಾ ಕಟ್ಟಡದ ನಕ್ಷೆಯ ಅನೇಕ ಪ್ರತಿಗಳನ್ನು ತಯಾರಿಸುವ ಸಂದರ್ಭಗಳು ಒದಗುತ್ತವೆ. ಆ ವೇಳೆ ಮೂಲ ನಕ್ಷೆಯ ಹಲವಾರು ಪ್ರತಿಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ತಯಾರಿಸುವ ಅನೇಕ ವಿಧಾನಗಳ ಪೈಕಿ ದ್ಯುತಿ ರಾಸಾಯನಿಕ ಪ್ರಕ್ರಿಯೆ ಒಂದು. ಇದರಲ್ಲಿ ವಿಶೇಷ ಪದಾರ್ಥವೊಂದರ ಮೂಲಕ ಹಾದುಹೋಗುವಂಥ ಬೆಳಕನ್ನು ಉಪಯೋಗಿಸಲಾಗುತ್ತದೆ. ಇದಕ್ಕೆ ನೀಲಿ ಮುದ್ರಣ ಅಥವಾ ನೀಲಿ ನಕ್ಷೆಯ ತಯಾರಿಕೆ ಎಂದು ಹೆಸರು.

ನೀಲಿ ನಕ್ಷೆ ಮೂಲನಕ್ಷೆಯ ಛಾಯಾಗ್ರಹೀ ಪ್ರತಿ ಎನ್ನಬಹುದು. ಏಕೆಂದರೆ ನೀಲಿ ನಕ್ಷೆಯ ತಯಾರಿಕೆ ಛಾಯಾಗ್ರಹಣವನ್ನೇ ಹೋಲುತ್ತದೆ. ಸಂವೇದೀಕರಿಸಿದ ಕಾಗದವೊಂದಕ್ಕೆ ಋಣವಸ್ತುವಿನ ಮುಖಾಂತರ ಬೆಳಕನ್ನು ಹಾಯಿಸಿ, ಆ ಬೆಳಕು ಕಾಗದದ ಮೇಲೆ ಪ್ರಕ್ರಿಯೆಯನ್ನು ಉಂಟುಮಾಡುವಂತೆ ಮಾಡಿ, ಬಳಿಕ ಆ ಕಾಗದವನ್ನು ನೀರಿನಲ್ಲಿ ಸಂಸ್ಕರಿಸಿ ಅದರ ಮೇಲೆ ನಕ್ಷೆಯ ಪ್ರತಿಬಿಂಬವನ್ನು ಮೂಡಿಸುತ್ತಾರೆ. ಋಣವಸ್ತು ಪಾರಕ ಕಾಗದ ಅಥವಾ ಪಾರಕಗೊಳಿಸಿದ ಬಟ್ಟೆಯಾಗಿದ್ದು ಅದರ ಮೇಲೆ ಮೂಲನಕ್ಷೆಯನ್ನು ಅಪಾರಕ ರೇಖೆಗಳಿಂದ ಗುರುತಿಸಿರುತ್ತಾರೆ. ಈ ಅಪಾರಕ ರೇಖೆಗಳನ್ನು ಇಂಡಿಯನ್ ಇಂಕ್ ಎಂಬ ವಿಶೇಷ ಶಾಯಿಯಿಂದ ಎಳೆದಿರುವರು. ಮುದ್ರಣ ಕಾಗದ ಬರಿ ಬಿಳಿ ಕಾಗದ; ಅದರ ಮೇಲೆ ಕಬ್ಬಿಣದ ಅಮೋನಿಯಮ್ ಸಿಟ್ರೇಟ್ ಮತ್ತು ಪೊಟ್ಯಾಸಿಯಮ್ ಫೆರೊಸೈಯನೈಡ್ ಎಂಬ ರಾಸಾಯನಿಕ ವಸ್ತುಗಳ ದ್ರಾವಣವನ್ನು ಲೇಪಿಸಿರುತ್ತಾರೆ. ಈ ಕಾಗದದ ಮೇಲೆ ಪಾರಕ ನಕ್ಷೆಯನ್ನು ಒಳಗೊಂಡ ರೇಖನ ಅಥವಾ ನಕಲೆತ್ತುವ (ಟ್ರೇಸಿಂಗ್) ಕಾಗದವನ್ನು ಇಟ್ಟು ಬೆಳಕಿಗೆ ಹಿಡಿದಾಗ ಬೆಳಕು ಪಾರಕ ಕಾಗದದ ಮುಖಾಂತರ ಮಾತ್ರ ಹಾಯುತ್ತದೆ; ಅಪಾರವಾದ ನಕ್ಷೆಯ ರೇಖೆಗಳ ಮುಖಾಂತರ ಹಾಯುವುದಿಲ್ಲ. ನಕ್ಷೆಯ ರೇಖೆಗಳಿರುವ ಕೆಳಗೆ ಬೆಳಕಿನ ಪ್ರಕ್ರಿಯೆ ಇರುವುದಿಲ್ಲ. ಬೇರೆಡೆಗಳಲ್ಲಿ ಸಂವೇದೀಕರಿಸಿದ ಕಾಗದ ಬೆಳಕಿನ ಪ್ರಕ್ರಿಯೆಗೆ ಒಳಗಾಗುತ್ತದೆ. ಇದಾದ ಬಳಿಕ ಸಂವೇದಿಕರಿಸಿದ ಕಾಗದವನ್ನು ಶುಭ್ರವಾದ ನೀರಿನಲ್ಲಿ ಮುಳುಗಿಸಿದರೆ ಪ್ರಕ್ರಿಯೆಗೆ ಒಳಗಾಗದ ಭಾಗದಲ್ಲಿ ಇರುವ ರಾಸಾಯನಿಕ ಪದಾರ್ಥಗಳು ನೀರಿನಲ್ಲಿ ಕರಗಿ ಹೋಗಿ, ಆ ಜಾಗಗಳಲ್ಲಿ ಬಿಳಿಯ ಕಾಗದದ ಮೇಲ್ಮೈ ಗೋಚರಿಸಿ ನಕ್ಷೆಯ ಪ್ರತಿಬಿಂಬ ಗೋಚರಿಸುತ್ತದೆ. ರಾಸಾಯನಿಕ ಪ್ರಕ್ರಿಯೆ ನಡೆದ ಮಿಕ್ಕ ಭಾಗದಲ್ಲಿ ನೀಲಿ ಹಿನ್ನೆಲೆ ಉಂಟಾಗುತ್ತದೆ. ಇದರಿಂದಾಗಿ ಇದಕ್ಕೆ ನೀಲಿ ಮುದ್ರಿತ ಪ್ರತಿ ಅಥವಾ ನೀಲಿ ನಕ್ಷೆ ಎನ್ನುತ್ತಾರೆ. ನೀಲಿಯ ಹಿನ್ನೆಲೆಗೂ ನಡು ನಡುವೆ ಇರುವ ನಕ್ಷೆಯ ಬಿಳಿಯ ರೇಖೆಗಳಿಗೂ ಇರುವ ವೈದೃಶ್ಯವನ್ನು ಹೆಚ್ಚಿಸಬೇಕಾದರೆ ಈ ಮುದ್ರಿತ ಪ್ರತಿಯನ್ನು ಪೊಟ್ಯಾಸಿಯಮ್ ಬೈಕ್ರೊಮೇಟನ್ನು ನೀರಿನಲ್ಲಿ ಕರಗಿಸಿ ತಯಾರಿಸಿದ ಉತ್ಕರ್ಷಣಕಾರಿ ದ್ರಾವಣದಲ್ಲಿ ಮುಳುಗಿಸಿ ಬಳಿಕ ಅದನ್ನು ಶುದ್ಧವಾದ ನೀರಿನಲ್ಲಿ ಚೆನ್ನಾಗಿ ಮುಳುಗಿಸಿ ತರುವಾಯ ಹೊರತೆಗೆದು ಒಣಗಿಸಬೇಕು. ಮಾಹಿತಿಗಳನ್ನು ಮತ್ತು ಬದಲಾವಣೆಗಳನ್ನು ಈ ನೀಲಿ ನಕ್ಷೆಯ ಮೇಲೆ ಬರೆಯಬೇಕಾದರೆ ನೀಲಿ ಹಿನ್ನೆಲೆಯನ್ನು ಬಿಳಿಚಿಸುವಷ್ಟು ಚುರುಕಾದ ಆಲ್ಕಲೈನ್ ದ್ರಾವಣವೊಂದನ್ನು ಉಪಯೋಗಿಸಬೇಕು. ಈ ಕಾರ್ಯಕ್ಕೆ ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣ ಅತ್ಯುತ್ತಮ. ಆದರೆ ಸಾಮಾನ್ಯವಾಗಿ ಸಿಗುವ ಸೋಡಿಯಮ್ ಬೈಕಾರ್ಬನೇಟನ್ನು ಬೇಕಾದರೂ ನೀರಿನಲ್ಲಿ ವಿಲೀನಿಸಿ ಉಪಯೋಗಿಸಬಹುದು.
ಶುಭ್ರ ನೀಲಿಯ ಹಿನ್ನೆಲೆಯನ್ನು ಒಳಗೊಂಡ ಬಿಳಿಯ ನಕ್ಷೆಯಿರುವ ಒಳ್ಳೆಯ ಪ್ರತಿ ಉಂಟಾಗಬೇಕಾದರೆ ಬೆಳಕಿಗೆ ಒಡ್ಡುವ ಅವಧಿಯನ್ನು ಸರಿಯಾಗಿ ಗೊತ್ತುಪಡಿಸಿಕೊಳ್ಳಬೇಕು. ಇದಕ್ಕೋಸ್ಕರ ಮೊತ್ತಮೊದಲು ನೀಲಿ ಮುದ್ರಣ ಕಾಗದದ ಒಂದೆರಡು ಸಣ್ಣ ತುಣುಕುಗಳನ್ನು ಬೆಳಕಿಗೆ ಒಡ್ಡಿ ನೋಡಬೇಕು. ಹಿನ್ನೆಲೆ ತೆಳು ನೀಲಿಯಾಗಿದ್ದಲ್ಲಿ ಬೆಳಕಿಗೆ ಒಡ್ಡಿದ ಕಾಲ ಕಡಿಮೆ. ಬದಲು ಈ ಪರೀಕ್ಷಾ ಪ್ರತಿ ಒಂದು ರೀತಿಯ ಸುಟ್ಟ ಲಕ್ಷಣವನ್ನು ತೋರಿಸಿದರೆ, ಬೆಳಕಿಗೆ ಒಡ್ಡಿದ ಕಾಲ ಹೆಚ್ಚು. ಹೀಗೆ ಒಂದೆರಡು ಸಲ ಪ್ರಯೋಗ ಮಾಡಿ ಸರಿಯಾದ ನೀಲಿ ನಕ್ಷೆ ಉಂಟಾಗಲು ಎಷ್ಟು ಕಾಲ ಕಾಗದವನ್ನು ಒಡ್ಡಬೇಕು ಎನ್ನುವುದನ್ನು ನಿರ್ಧರಿಸಬಹುದು.

ನೀಲಿ ಮುದ್ರಣ ಯಂತ್ರಗಳು : ಬಹಳ ಹೆಚ್ಚು ಸಂಖ್ಯೆಯಲ್ಲಿ ನೀಲಿ ನಕ್ಷೆಯ ಪ್ರತಿಗಳನ್ನು ತಯಾರಿಸಬೇಕಾದರೆ ಯುಕ್ತವಾದ ಯಂತ್ರವೊಂದು ಇದ್ದಲ್ಲಿ ಅತ್ಯುತ್ತಮ. ಇಂಥ ಒಂದು ಯಂತ್ರದಲ್ಲಿ ಸುರುಳಿಯಿಂದ ನೀಲಿ ನಕ್ಷಾ ಕಾಗದ ಒಂದೇ ಸಮನೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಅದೇ ಕಾಲದಲ್ಲಿ ಮಸಿಯಿರುವ ಭಾಗಗಳು ಮೇಲಿರುವಂತೆ ಮಾಡಿರುವ ಲೇಖನಗಳನ್ನು ಒಂದು ಕಡೆಯಿಂದ ಒದಗಿಸಲಾಗುತ್ತದೆ. ಈ ಲೇಖನ ಒಂದು ಗಾಜಿನ ಉರುಳೆಗೆ ತಾಕಿಕೊಂಡು ಮೇಲೆ ಸಾಗುತ್ತದೆ. ಉರುಳೆಯಲ್ಲಿ ಚಾಪದೀಪಗಳ ಸಮೂಹ ಇರುತ್ತದೆ. ಇವುಗಳ ಬೆಳಕು ಲೇಖನದ ಮುಖಾಂತರ ಹಾದು ನೀಲಿ ಮುದ್ರಣ ಕಾಗದದ ಮೇಲೆ ಪ್ರಕ್ರಿಯೆಯನ್ನು ಉಂಟುಮಾಡುತ್ತದೆ. ಅದು ಮೇಲೆ ಹಾದು ಹೋಗುತ್ತಿರುತ್ತದೆ. ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಹೀಗಾಗಿ ನೀಲಿ ಮುದ್ರಣ ಕಾಗದದ ಮೇಲೆ ಎಷ್ಟು ನಕ್ಷೆಗಳನ್ನು ಬೇಕಾದರೂ ಶೀಘ್ರವಾಗಿ ಮೂಡಿಸಬಹುದು. ಕೆಲವು ಯಂತ್ರಗಳಲ್ಲಿ ತೊಳೆಯುವ ಮತ್ತು ಒಣಗಿಸುವ ಸಾಧನಗಳೂ ಇರುವುವು. ಅವುಗಳಲ್ಲಿ ಏಕಕಾಲದಲ್ಲಿ ನೀಲಿ ನಕ್ಷೆ ತಯಾರಾಗುತ್ತದೆ.               (ಎನ್.ಎನ್.ಎಂ.)
(ಪರಿಷ್ಕರಣೆ: ಎಂ.ಜಿ.ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ